ಕರ್ನಾಟಕದ ಮುಖ್ಯ ನದಿಗಳಲ್ಲಿ ಒಂದು. ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಹರಿಯುತ್ತದೆ. ಬೆಳಗಾಂವಿ ನಗರಕ್ಕೆ 40 ಕಿಮೀ ಪಶ್ಚಿಮದಲ್ಲಿ ಸಹ್ಯಾದ್ರಿ ಶ್ರೇಣಿಯ ಅಂಚಿನಲ್ಲಿ ರಾಮಘಟ್ಟದಲ್ಲಿ ಉಗಮಿಸಿ, ಸ್ಥೂಲವಾಗಿ ಪುರ್ವಾಭಿಮುಖವಾಗಿ ಹರಿದು, ಬಿಜಾಪುರ ಜಿಲ್ಲೆಯ ಚಿಮ್ಮಲಗಿಯ ಬಳಿ ಕೃಷ್ಣೆಯನ್ನು ಕೂಡಿಕೊಳ್ಳುವ ಈ ನದಿಯ ಉದ್ದ 305 ಕಿಮೀ. ಬೆಳಗಾಂವಿ ಜಿಲ್ಲೆಯ ಕಾನೂರ, ಅಡಕೂರ, ದಡ್ಡಿ, ವಂಟಮುರಿ, ಘೋಡಗೇರಿ, ಕೊಣ್ಣೂರ, ಧೂಪದಾಳ, ಗೋಕಾಕ, ಹುಣಶ್ಯಾಳ, ಸುಣದೇಳಿ ಊರುಗಳೂ ವಿಜಯಪುರ ಜಿಲ್ಲೆಯ ಬಾಗಲಕೋಟ, ಚಿಮ್ಮಲಗಿಗಳೂ ಈ ನದಿಯ ತೀರದಲ್ಲಿವೆ. ಬೆಳಗಾವಿ ಜಿಲ್ಲೆಯಲ್ಲಿ ಹುಕ್ಕೇರಿ ಗೋಕಾಕ ತಾಲ್ಲೂಕುಗಳ ಮೂಲಕ 193 ಕಿಮೀ ದೂರ ಹರಿದ ಮೇಲೆ ಮುಧೋಳ ನಗರಕ್ಕೆ ಪಶ್ಚಿಮದಲ್ಲಿ ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿ ಮುಧೋಳ ಮತ್ತು ಬಾಗಲಕೋಟೆ ತಾಲ್ಲೂಕುಗಳ ಮೂಲಕ ಸುಮಾರು 112 ಕಿಮೀ ದೂರ ಪ್ರವಹಿಸುತ್ತದೆ. ಗೋಕಾಕದ ಬಳಿಯ ಜಲಪಾತದ ಎತ್ತರ ಸು. 46 ಮೀ. ಅಲ್ಲೊಂದು ಕಟ್ಟೆ ಕಟ್ಟಿ ನದಿಯ ನೀರನ್ನು ಸಾಗುವಳಿಗೂ ವಿದ್ಯುತ್ತಿನ ಉತ್ಪಾದನೆಗೂ ಬಳಸಿಕೊಳ್ಳಲಾಗುತ್ತಿದೆ. ಗೋಕಾಕ ಗುಡ್ಡದಲ್ಲಿ ಕಣಿವೆಯ ಪ್ರದೇಶದಲ್ಲಿ ಹರಿಯುವ ನದಿಯ ನೋಟ ತುಂಬ ಸುಂದರವಾಗಿದೆ. ವಿಜಯಪುರ ಜಿಲ್ಲೆಯ ಹೆರಕಲ್ ಬಳಿ ಈ ನದಿಯಿಂದಾದ ಕೊರಕಲೂ ನೋಡಲು ರಮ್ಯ. ಘಟಪ್ರಭಾ ನದಿ ಕೃಷ್ಣೆಯನ್ನು ಸೇರುವೆಡೆಯಲ್ಲಿ ಅದರ ಮುಖ 100 ಮೀ ಅಗಲವಾಗಿದೆ.

ಹಿರಣ್ಯಕೇಶಿ, ತಾಮ್ರಪರ್ಣಿ - ಇವು ಘಟಪ್ರಭಾ ನದಿಯ ಉಪನದಿಗಳು. ಘಟಪ್ರಭಾ ನದಿಗೆ ಸಮೃದ್ಧವಾದ ಜಲಸಂಪನ್ಮೂಲವಿದೆ. ಇದಕ್ಕೆ 50-250 ಮಳೆ ಬೀಳುವ ಮಲೆನಾಡ ವಿಶಾಲ ಜಲಾನಯನ ಪ್ರದೇಶವಿದೆ. ಇದರಲ್ಲಿ ವಾರ್ಷಿಕವಾಗಿ ಹರಿಯುವ ನೀರಿನ ಸರಾಸರಿ ಪರಿಮಾಣ 12,100 ಕೋಟಿ ಘನ ಅಡಿಗಳು. ಆದರೆ ಮಳೆಗಾಲದ ತರುವಾಯ ನದಿ ಕೃಶವಾಗತೊಡಗಿ ಸಣ್ಣ ತೊರೆಯಂತಾಗಿ ಬೇಸಗೆಯಲ್ಲಿ ಬಹಳ ಮಟ್ಟಿಗೆ ಬತ್ತಿಯೇ ಹೋಗುತ್ತದೆ. 	(ಎಸ್.ವಿ.ಪಿಎ.)

ಘಟಪ್ರಭಾ ಕಣಿವೆ ಅಭಿವೃದ್ಧಿ ಯೋಜನೆ : ಘಟ್ಟ ಪ್ರದೇಶದಲ್ಲಿ ಮಳೆ ನಿಯತವಾಗಿಯೂ ವಿಪುಲವಾಗಿಯೂ ಬೀಳುವುದಾದರೂ ನದಿಯ ಪುರ್ವಭಾಗದ ಬಂiÀÄಲಿನಲ್ಲಿ ಅದು ತೀರ ಕಡಿಮೆ. ಬೆಳಗಾವಿ ಜಿಲ್ಲೆಯ ಪುರ್ವಭಾಗವೂ ಇಡೀ ವಿಜಯಪುರ ಜಿಲ್ಲೆಯೂ ಅನಾವೃಷ್ಟಿ ಪ್ರದೇಶಗಳಾಗಿರುವುದರಿಂದ ಅವು ಪದೇ ಪದೇ ಕ್ಷಾಮ ಮತ್ತು ಅಭಾವ ಪರಿಸ್ಥಿತಿಗಳಿಗೆ ಒಳಗಾಗುತ್ತವೆ. ಆದರೆ ಅಲ್ಲಿ ಹರಿಯುವ ನದಿತೊರೆಗಳ ಜಲಸಂಪತ್ತನ್ನು ಉಪಯೋಗಿಸಿಕೊಂಡು ಭಾರಿ ಪ್ರಮಾಣದಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಿ, ಅಲ್ಲಿಯ ಕಠಿಣ ಜೀವನ ಪರಿಸ್ಥಿತಿಗಳನ್ನು ಬಗೆಹರಿಸುವುದು ಅಸಾಧ್ಯವೇನಲ್ಲ.

ಘಟಪ್ರಭಾ ಯೋಜನೆಯ ಇತಿಹಾಸ : ಗೋಕಾಕ ಜಲಪಾತದ ಔನ್ನತ್ಯದ ಅನುಕೂಲವನ್ನು ಪಡೆದುಕೊಂಡು ಘಟಪ್ರಭಾ ನದಿಯನ್ನು ನೀರಾವರಿಗೆ ಬಳಸಿಕೊಳ್ಳುವ ಒಂದು ಯೋಜನೆ 1852ರಷ್ಟು ಹಿಂದೆಯೇ ರೂಪುಗೊಂಡಿತು. 1853ರಲ್ಲಿ ಪ್ರಾರಂಭಿಕ ಸರ್ವೇಕ್ಷಣೆಗಳು ನಡೆದವು; ಜಲಪಾತದ ಮೇಲಕ್ಕೆ 3.25 ಕಿಮೀ ದೂರದಲ್ಲಿ ಒಂದು ಗೊತ್ತಾದ ಸ್ಥಳದಿಂದ ನಾಲೆಯನ್ನು ತೆಗೆಯಲು ಯೋಜನೆಗಳನ್ನು ತಯಾರಿಸಲಾಯಿತು. ಜಲಪಾತಕ್ಕೆ ಮೇಲೆ 4 ಕಿಮೀ ದೂರದಲ್ಲಿ ಧೂಪದಾಳದ ಬಳಿ ಈ ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಲು ಹಾಗೂ ಅಲ್ಲಿಂದ 24 ಕಿಮೀ ಉದ್ದದ ಗೋಕಾಕ ನಾಲೆಯನ್ನು ರಚಿಸಲು 1877ರಲ್ಲಿ ಯೋಜನೆಯೊಂದನ್ನು ಹಿಂದಿನ ಮುಂಬಯಿ ಸರ್ಕಾರ ಕ್ಷಾಮಪರಿಹಾರ ಕಾರ್ಯದ ಅಂಗವಾಗಿ ಮಂಜೂರು ಮಾಡಿತು. ಈ ಕೆಲಸವನ್ನು 15 ಲಕ್ಷ ರೂ. ವೆಚ್ಚದಲ್ಲಿ 1897 ರ ಹೊತ್ತಿಗೆ ಪುರ್ಣಗೊಳಿಸಲಾಯಿತು. ಈ ಯೋಜನೆಯ ಮುಂದುವರಿಕೆಯಾಗಿ ಜಲಾಶಯವೊಂದನ್ನು ನಿರ್ಮಿಸಿ ನದಿಯ ಎರಡು ದಂಡೆಗಳಿಂದಲೂ ನಾಲೆಗಳನ್ನು ತೆಗೆಯುವ ದಡ್ಡಿ ಕಟ್ಟೆ ಯೋಜನೆಯನ್ನು 1924ರಲ್ಲಿ ತಯಾರಿಸಲಾಯಿತು. ಆದರೆ ಈ ಯೋಜನೆಯ ಪ್ರತಿಫಲ ಸಮಪರ್ಕವಾಗಿರದೆಂಬ ಕಾರಣದಿಂದ ಇದನ್ನು ಕಾರ್ಯರೂಪಕ್ಕೆ ತರಲಿಲ್ಲ.

1924ರಲ್ಲಿ ಆಗಿನ ಮುಂಬಯಿ ಸರ್ಕಾರ ಘಟಪ್ರಭಾ ಎಡದಂಡೆ ನಾಲೆಯ ಯೋಜನೆಯನ್ನು ಸಿದ್ಧಗೊಳಿಸಿತು. ಘಟಪ್ರಭಾ ಮತ್ತು ಕೃಷ್ಣಾನದಿಗಳ ನಡುವಣ ಭೂಮಿಯನ್ನು ನೀರಾವರಿಗೆ ಒಳಪಡಿಸುವ ನಾಲಾ ವ್ಯವಸ್ಥೆಯೊಂದನ್ನು ರಚಿಸಬೇಕೆಂಬುದು ಅದರ ಉದ್ದೇಶ. ನದಿಯ ಎಡದಂಡೆಯಲ್ಲಿ ರಚಿಸಲುದ್ದೇಶಿಸಿದ್ದ ಈ ವ್ಯವಸ್ಥೆಯಲ್ಲಿ 117 ಕಿಮೀ ಉದ್ದದ ಒಂದು ಮುಖ್ಯ ನಾಲೆಯನ್ನೂ 5 ಶಾಖಾನಾಲೆಗಳನ್ನೂ ನಿರ್ಮಿಸಬೇಕೆಂದು ಯೋಚಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಆಗ ಈ ಯೋಜನೆಯನ್ನು ತ್ಯಜಿಸ ಬೇಕಾಯಿತು. ಹಿಂದಿನ ಮುಂಬಯಿ ಸರ್ಕಾರದ ಯುದ್ಧಾನಂತರ ಪುನಾರಚನಾ ಯೋಜನೆಗಳ ಪೈಕಿ ಒಂದು ಯೋಜನೆಯನ್ನಾಗಿ ಘಟಪ್ರಭಾ ಜಲಾಶಯ ಯೋಜನೆಯನ್ನು ಪರಿಷ್ಕರಿಸುವ ಕೆಲಸವನ್ನು 1947ರಲ್ಲಿ ಕೈಗೊಳ್ಳಲಾಯಿತು. ಇದಕ್ಕಾಗಿ ನಡೆಸಲಾದ ದೀರ್ಘ ಪರಿಶೀಲನೆಯ ಅನಂತರ ಘಟಪ್ರಭಾ ನದಿಗೆ ಅಡ್ಡಲಾಗಿ ಹಡಲ್ಗದ ಬಳಿಯಲ್ಲೂ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಅಜ್ರಾ ಬಳಿಯಲ್ಲೂ ಎರಡು ಜಲಾಶಯಗಳನ್ನು ನಿರ್ಮಿಸುವ ಯೋಜನೆಗಳು ಸಿದ್ಧವಾದವು.

1956ರಲ್ಲಿ ಆದ ರಾಜ್ಯ ಪುನರ್ವಿಂಗಡಣೆಯ ಪರಿಣಾಮವಾಗಿ ಈ ಯೋಜನೆಯ ದೃಷ್ಟಿಯಲ್ಲಿ ಬದಲಾವಣೆಯಾಗಿದೆ. ಹಿಂದೆ ಪುರ್ಣವಾಗಿ ಆಗಿನ ಮುಂಬಯಿ ರಾಜ್ಯಕ್ಕೆ ಸೇರಿದ್ದ ಈ ಯೋಜನೆ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ - ಜಲಾಶಯಗಳು ಮಹಾರಾಷ್ಟ್ರದಲ್ಲೂ ನಾಲೆಗಳೂ ಕರ್ನಾಟಕದಲ್ಲೂ - ಬರುವಂತಾಯಿತು. ಆದ್ದರಿಂದ ಸ್ವಾಭಾವಿಕವಾಗಿಯೇ ಇದರ ಬಗ್ಗೆ, ಮುಖ್ಯವಾಗಿ ಮುಳುಗಡೆ ಆಗುವ ಭೂಮಿಯ ಬಗ್ಗೆ, ಎರಡೂ ರಾಜ್ಯಗಳ ನಡುವೆ ದೀರ್ಘಸಮಾಲೋಚನೆಗಳು ನಡೆದವು. ಜಲಾಶಯದಿಂದ ನೆರೆಯ ರಾಜ್ಯದ ಜಮೀನುಗಳ ಮುಳುಗಡೆಯಾಗುವುದನ್ನು ತಪ್ಪಿಸಲು ಹಡಲ್ಗದ ಕಟ್ಟೆಯ ನಿವೇಶನಕ್ಕೆ ಕೆಳಗಡೆಯಲ್ಲಿ ಜಲಾಶಯ ನಿರ್ಮಾಣಕ್ಕೆ ಅನುಕೂಲವಾದ ಮತ್ತೊಂದು ಸ್ಥಳವನ್ನು ಕಂಡುಹಿಡಿಯುವುದು ಅಪೇಕ್ಷಣೀಯವೆನಿಸಿತು. ಹಿಡಕಲ್ ಬಳಿಯಲ್ಲಿ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಲು ನಿರ್ಧರಿಸಲಾಯಿತು.

ಹಿಡಕಲ್ ಬಳಿಯ ಜಲಾಶಯದಿಂದ 114 ಕಿಮೀ ಉದ್ದದ ಎಡದಂಡೆಯ ನಾಲೆಯನ್ನೂ 198ಕಿಮೀ ಉದ್ದದ ಬಲದಂಡೆಯ ನಾಲೆಯನ್ನೂ ನಿರ್ಮಿಸಲಾಗಿದೆ. ಈ ಜಲಾಶಯದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಹುಕ್ಕೇರಿ, ಅಥಣಿ, ರಾಯಬಾಗ್, ಗೋಕಾಕ, ಪರಸಗಡ ಮತ್ತು ರಾಮದುರ್ಗ ತಾಲ್ಲೂಕುಗಳಲ್ಲೂ ವಿಜಾಪುರ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ, ಬಾಗಲಕೋಟೆ ಮತ್ತು ಹುನಗುಂದ ತಾಲ್ಲೂಕುಗಳಲ್ಲೂ ಒಟ್ಟು 7.50 ಲಕ್ಷ ಎಕರೆ ಭೂಮಿಗೆ ಪ್ರಯೋಜನವಾಗಿದೆ. ಈ ಯೋಜನೆಯ ವೆಚ್ಚ 90 ಕೋಟಿ ರೂ. ಮುಂದೆ ಕಾಣಿಸಿರುವಂತೆ ಮೂರು ಹಂತಗಳಲ್ಲಿ ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಮೊದಲನೆಯ ಹಂತದಲ್ಲಿ ಎಡದಂಡೆಯಿಂದ 44 ಮೈ. ಉದ್ದದ ನಾಲೆಯ ರಚನೆ ಸೇರಿದೆ. ಈ ನಾಲೆಯ ಜಲವಿಸರ್ಜನ ಸಾಮಥರ್ಯ್ 1,500 ಕ್ಯೂಸೆಕ್ಗಳು. ಈಗಿನ ಧೂಪದಾಳ ಒಡ್ಡಿನಿಂದ ಪ್ರಾರಂಭವಾಗುವ ಈ ನಾಲೆಗೆ 31 ಮೈ. ಶಾಖಾ ನಾಲೆಗಳಿರುತ್ತವೆ. ಈ ಯೋಜನೆಯ ವೆಚ್ಚ 692 ಲಕ್ಷ ರೂ. ಇದು ಘಟಪ್ರಭಾ ಮತ್ತು ಕೃಷ್ಣಾನದಿ ಬಂiÀÄಲಿನ 136 ಗ್ರಾಮಗಳಿಗೆ ಸೇರಿದ 1,20,000 ಎಕರೆ ಭೂಮಿಗೆ ನೀರುಣಿಸುತ್ತದೆ. ಘಟಪ್ರಭಾ ಎಡನಾಲೆಯನ್ನು 71 ಮೈಲಿಗಳ ಉದ್ದಕ್ಕೆ ವಿಸ್ತರಿಸುವುದೂ ಇಡೀ ನಾಲಾ ಪ್ರದೇಶದಲ್ಲಿ ಒಟ್ಟು 2.98 ಲಕ್ಷ ಎಕರೆಗಳ ಭೂಮಿಗೆ ನೀರು ಒದಗಿಸುವ ಸು. 62 ಮೈ. ಉದ್ದದ ಮೂರು ಶಾಖಾ ನಾಲೆಗಳನ್ನು ನಿರ್ಮಿಸುವುದೂ ಘಟಪ್ರಭಾ ಎಡದಂಡೆಯ ನಾಲೆಯಲ್ಲಿ ನೀರು ಹರಿಸುವ ಉದ್ದೇಶದಿಂದ ಈಗಿನ ಒಡ್ಡಿನಿಂದ ಮೇಲಕ್ಕೆ 12 ಮೈ. ದೂರದಲ್ಲಿ ಹಿಡಕಲ್ನಲ್ಲಿ 2,300 ಕೋಟಿ ಘ.ಅ. ನೀರನ್ನು ಶೇಖರಿಸಲು ಕಟ್ಟೆ ಕಟ್ಟುವುದು ಎರಡನೆಯ ಹಂತ. ಈಗಿನ ಅಂದಾಜಿನಂತೆ ಇದಕ್ಕೆ ಒಟ್ಟು ವೆಚ್ಚ 3,968 ಲಕ್ಷ ರೂ. ಹಿಡಕಲ್ ಕಟ್ಟೆಯಿಂದ 123 ಮೈ.ಉದ್ದ. ಘಟಪ್ರಭಾ ಬಲದಂಡೆ ನಾಲೆಯ ನಿರ್ಮಾಣವೂ ಈ ನಾಲೆಯಲ್ಲಿ ನೀರು ಹರಿಸುವುದಕ್ಕಾಗಿ 2,770 ಕೋಟಿ. ಘ.ಅ. ನೀರನ್ನು ದಾಸ್ತಾನು ಮಾಡಲು ಹಿಡಕಲ್ ಕಟ್ಟೆಯನ್ನು ಅದರ ಅಂತಿಮ ಎತ್ತರಕ್ಕೆ ಹೆಚ್ಚಿಸುವುದೂ ಮೂರನೆಯ ಹಂತ. ಈಗಿನ ಅಂದಾಜಿನಂತೆ ಇದಕ್ಕೆ ತಗಲುವ ವೆಚ್ಚ. 29.42 ಕೋಟಿ ರೂ. ಇದರಿಂದ 3 ಲಕ್ಷ ಎಕರೆಗಳಿಗೆ ನೀರಾವರಿ ಸೌಲಭ್ಯ ಒದಗುತ್ತದೆ. ಕಟ್ಟೆಯ ಎತ್ತರ ಹೆಚ್ಚಿಸುವ ಕೆಲಸವನ್ನು ಮೊದಲನೆಯ ಹಂತಕ್ಕೆ ಅನುಬಂಧವಾಗಿ ತೆಗೆದುಕೊಳ್ಳಬೇಕೆಂದು ಸರ್ಕಾರ ಈಗ ತೀರ್ಮಾನಿಸಿದೆ.

ಘಟಪ್ರಭಾ ಯೋಜನೆಯ ಮೂರು ಹಂತಗಳಿಂದ 5.98 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಏರ್ಪಟ್ಟಿದೆ. ಈ ಪ್ರದೇಶದ ಬಹುಭಾಗದಲ್ಲಿ ಮುಂಗಾರು ಬೆಳೆಯನ್ನೂ ಕೆಲವು ಕಡೆಗಳಲ್ಲಿ ಹಿಂಗಾರು ಫಸಲನ್ನೂ ಪಡೆಯಬಹುದು. 3’-4’ ಆಳದ ಕಪ್ಪು ಮಣ್ಣು ಇರುವೆಡೆಗಳಲ್ಲಿ ಹತ್ತಿ ಬೆಳೆಯುತ್ತದೆ. ಮುಖ್ಯ ಬೆಳೆಗಳು ಜೋಳ, ಮೆಕ್ಕೆಜೋಳ, ಸೆಜ್ಜೆ, ನೆಲಗಡಲೆ, ಗೋದಿ, ಮತ್ತು ಹತ್ತಿ. ಈ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿದ ಮೇಲೆ ಮಿಶ್ರ ತಳಿಯ ಮೆಕ್ಕೆಜೋಳ, ಸೆಜ್ಜೆ, ಜೋಳ, ಹತ್ತಿ, ದ್ವಿದಳ ಧಾನ್ಯಗಳು, ನೆಲಗಡಲೆ, ಸೂರ್ಯಕಾಂತಿ, ಗೋದಿ, ಕಬ್ಬು ಬೆಳೆಯಬಹುದು. ವರ್ಷಕ್ಕೆ 2.94 ಲಕ್ಷ ಟನ್ ಆಹಾರ ಧಾನ್ಯಗಳೂ 2.90 ಲಕ್ಷ ಟನ್ ವಾಣಿಜ್ಯ ಬೆಳೆಗಳೂ ಹೆಚ್ಚಾಗಿ ಬೆಳೆಯುವ ನಿರೀಕ್ಷೆಯಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ